ಕನ್ನಡ ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕರ್ನಾಟಕದ ಉದಯ ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ "ರಾಜಪ್ರಮುಖ"ರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ೧೯೭೫ರ ವರೆಗೆ ಸಂದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ. ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ ೧, ೧೯೫೬ ರಂದು ರಾಜ್ಯ ಪುನಸ್ಸಂಘಟನಾ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸು, ಹೈದರಾಬಾದ್, ಮತ್ತು ಬಾಂಬೆ ರಾಜ್ಯಗಳ ಕನ್ನಡ-ಪ್ರಧಾನ ಪ್...